Saturday, February 6, 2010

ಎರಡು ಕನಸು

ಭಯಾನಕ ಮತ್ತು ರೊಮ್ಯಾಂಟಿಕ್ ಕನಸುಗಳೆರಡು ಮಾತಾಡುತ್ತಿದ್ದವು.
ಭಯಾನಕ ಕನಸು: ನಿನ್ನೆ ರಾತ್ರಿ ಒಬ್ಬನನ್ನ ಹೇಗೆ ಹೆದರಿಸ್ದೆ ಗೊತ್ತಾ! ತುಂಬಿ ಹರಿವ ನದಿ ಮದ್ಯದಲ್ಲಿ ಅವನಿದ್ದಾನೆ ದಡದತ್ತ ಈಜುತ್ತಾ ಈಜುತ್ತಾ ಕೈಗಳು ಸೋತಿವೆ. ಎಷ್ಟೇ ಪ್ರಯತ್ನಿಸಿದರೂ ದಡ ಸಿಕ್ತಾನೇ ಇಲ್ಲ. ಜೋರಾಗಿ ಕಿರುಚುತ್ತಾನೆ, ಗಂಟಲಿಂದ ಸ್ವರವೇ ಹೊರಡುತ್ತಿಲ್ಲ. ಏಳೋದಕ್ಕೆ ಪ್ರಯತ್ನಿಸ್ತಾನೆ ಆದ್ರೆ ಏಳೋದಕ್ಕಾಗಲ್ಲ. ಯಾರೋ ಕಟ್ಟಿ ಹಾಕಿದಾಗಾಗುತ್ತೆ. ಹೆದರಿದ ಅವ್ನು ಕೊನೆಗೆ ಹಾಸ್ಗೇಲೇ ಉಚ್ಚೆ ಹೊಯ್ದ. ಹ್ಹ ಹ್ಹ ಹ್ಹ... ನೋಡು ನನ್ನ ಕಂಡ್ರೆ ಜನಕ್ಕೆಷ್ಟು ಭಯ. ಇದೊಂದು ಸಣ್ಣ ಸ್ಯಾಂಪಲ್ ಅಷ್ಟೆ. ಹೇ ಮೊನ್ನೆ ಯಡಿಯೂರಪ್ಪ ನನ್ನನ್ನ ನೋಡಿ ಮತ್ತೆರಡು ದಿನ ನಿದ್ದೇನೇ ಮಾಡ್ಲಿಲ್ಲ. ಬಳ್ಳಾರಿ ನಂಬರ್ ಪ್ಲೇಟ್ನ ಎರಡು ಬುಲ್ಡೋಜರ್ಗಳು ಕುಚರ್ಿಯನ್ನ ಹಾಗೇ ಎಳೀತಾ ಇದ್ವು. ಕುಚರ್ಿ ದಢಾಲ್ ಅಂತ ಮುರಿದೇ ಬಿಡ್ತು. ನೋಡು ಮುಖ್ಯಮಂತ್ರೀನೂ ನಂಗೆ ಹೆದರ್ತಾರೆ. ಈಗಿನ ಕಾಲದಲ್ಲಿ ಪ್ರೀತಿ ಅಲ್ಲ ಮುಖ್ಯ ಹೆದರಿಕೆ ಮುಖ್ಯ. ಹೆದರಿಕೆ ಇದ್ರೆ ಎಲ್ರೂ ಎಚ್ಚೆತ್ತುಕೊಂಡಿರುತ್ತಾರೆ. ಇಲ್ಲದಿದ್ದರೆ ಸೋಮಾರಿಗಳ ಥರ ಬಿದ್ಕೊಂಡಿರ್ತಾರೆ. ನಿನ್ನಿಂದಾಗಿ ಜಗತ್ತಲ್ಲಿರೋರೆಲ್ಲ ಹಾಳಾಗ್ತಿದ್ದಾರೆ. ಏನೇನೋ ಆಸೆಗಳನ್ನ ಅವರಲ್ಲಿ ಹುಟ್ಸಿ ಹೊಂಡಕ್ಕೆ ತಳ್ತೀಯ ಇದು ನಿಂಗೆ ಸರಿ ಕಾಣುತ್ತಾ?
ರೊಮ್ಯಾಂಟಿಕ್ ಕನಸು: ನಾನು ಕೂಡ ನಿನ್ನೆ ರಾತ್ರಿ ಹಾಯಾಗಿ ನಿದ್ರಿಸುತ್ತಿದ್ದ ಒಬ್ಬನ ನಿದ್ದೇಲಿ ಪ್ರವೇಶಿಸಿದ್ದೆ. ಆತನನ್ನ ಸುಂದರ ಉದ್ಯಾನದಲ್ಲಿ ಹೂವಿನ ಹಾಸಿಗೆ ಮೇಲೆ ಕೊಂಡೊಯ್ದೆ. ತಣ್ಣನೆ ಗಾಳಿ, ನವಿಲುಗರಿಯೊಂದು ಮೈ ಸೋಕಿ ಕಚಗುಳಿಯಿಡುತ್ತಿದೆ. ಸಮೀಪದಲ್ಲೇ ತಾವರೆ ಕೊಳ. ಅದರಲ್ಲಿ ಹಂಸಗಳು ಈಜಾಡುತ್ತಿವೆ. ಕೊಳದ ಪಕ್ಕದಲ್ಲೇ ಝರಿಯೊಂದು ಬುಝ್... ಎನ್ನುವ ಶ್ರುತಿಯೊಂದಿಗೆ ನೊರೆ ನೊರೆಯಾಗಿ ಧುಮ್ಮಿಕ್ಕುತ್ತಿದೆ. ಹೂವಿನ ತೋಟದಲ್ಲಿ ಮಲ್ಲಿಗೆ, ಗುಲಾಬಿಯಂತಹ ಜಗದೇಕ ಸುಂದರಿಯರು ಇಂಪಾಗಿ ಹಾಡುತ್ತಾ ಹೂವಿನ ಚೆಲುವಿಗೆ ಮರುಳಾಗಿದ್ದಾರೆ ಆತ ಅವರನ್ನೇ ನೋಡುತ್ತಾ ನೋಡುತ್ತಾ... ಆಹಾ. ಆತ ನನ್ನಿಂದ ಸಂತೋಷಗೊಂಡಿದ್ದಾನೆ. ಜಗದ ಸಾವಿರ ಸಾವಿರ ದುಃಖಗಳನ್ನೂ ಮರೆತು ನಿರಾಳನಾಗಿದ್ದಾನೆ. ಅವನ ಮನಸ್ಸಿನ ತುಂಬ ಪ್ರೀತಿ ತುಂಬಿಕೊಂಡಿದೆ.ಜಗತ್ತಲ್ಲಿ ಪ್ರೀತಿ ಇಲ್ಲದಿದ್ದರೆ ಎಲ್ಲವೂ ಶೂನ್ಯ. ನಿಜ ಜಗತ್ತಿನ ಜೊತೆ ಪ್ರತಿಯೊಬ್ಬ ಮನುಷ್ಯನೂ ಒಂದು ಕಲ್ಪನಾತ್ಮಕ ಜಗತ್ತು ಸೃಷ್ಠಿಸಿಕೊಂಡಿರ್ತಾನೆ. ಅದರಿಂದ ಅವ್ನು ಸೋಮಾರಿಯಾಗಲ್ಲ, ನಿರಾಳತೆ ಸಿಗುತ್ತೆ. ನಿನ್ನ ವಿಷ್ಯ ನಂಗೊತ್ತಿಲ್ವ. ಮೊನ್ನೆ ಯಾವ್ದೋ ಹಾಟರ್್ ಪೇಷೆಂಟ್ ನಿದ್ದೇಲಿ ಬಂದು ಅವನನ್ನೇ ಗೊಟಕ್ ಅನ್ನಿಸ್ಬಿಟ್ಟೆ. ಅವರೆಲ್ಲಾ ಏನು ಪಾಪ ಮಾಡಿ ನಿನ್ನಂತಹಾ ಪಾಪಿಯನ್ನ ಕಂಡ್ರೋ.ಲೋ ಮಹೀ ಏಳೋ ಬೆಳಿಗ್ಗೆ 9 ಗಂಟೆ ಆಯ್ತು ಅಂತ ಅಮ್ಮ ಹೇಳಿದಾಗ್ಲೆ ನಂಗೆ ಎಚ್ಚರ ಆಗಿದ್ದು. ಅಮ್ಮ ಬಂದು ಎಬ್ಬಿಸದೇ ಇದ್ದಿದ್ದರೆ ಅವರಿಬ್ಬರ ಕಾದಾಟ ಹಾಗೇಯೇ ಮುಂದುವರೀತಿತ್ತು!!!

Thursday, April 9, 2009

ಕೆಂಚಿಯ ರೋಷ

ಹೊಲೇರೆಣ್ಣು ನಾ ಕೆಂಚಿ
ನಮ್ ಹಟ್ಟಿ ಪಕ್ಕದ್
ಬಂಗ್ಲೆ ಬಡ್ಡಿ ಹೈದ
ಚಿಕ್ಕಂದಿನ್ಯಾಗ್ ಸಂಜೆ ಹೊತ್ನಲ್ಲಿ
ನನ್ ಕೂಡ ಆಟಕ್ ಬರ್ತಿದ್ದ
ಅವ್ನು ನನ್ ಪಿರೀತಿಸ್ತಿದ್ದ, ನಾನೂ;
ಈಗ ಅವನ್ಗೆ ಮದ್ವೆ ಆಗೈತೆ
ಯಾವ್ದೋ ಪೂಜಾರಪ್ಪನ್ ಮಗ್ಳು
ಅವ್ನ ಹೆಂಡ್ರು, ರಾತ್ರಿ
ದ್ಯೆವ್ವಗಳ್ ಓಡಾಡೋ ಹೊತ್ನಲ್ಲಿ
ನಮ್ಮಟ್ಟಿತಾವ ಬರೋ ಈ ಹೈದ
ಹಿತ್ಲಿನಲ್ಲಿರೋ ಕಾಡಿಗ್ ಕರ್ಕೊಂಡೋಯ್ತಾನೆ
ಬಟ್ಟೆ ಬಿಚ್ತಾನೆ, ಮೊಲೆ ಹಿಸಕ್ತಾನೆ
ಜಡೀತಾನೆ ಕೊನೆಗ್ ಜೋರಾಗ್ ಕೂಗ್ತಾನೆ.

ಹಗ್ಲಲ್ಲಿ ನನ್ ಕಂಡ್ರೆ ಹೇಸ್ಗೆ ಪಡೋನು
ರಾತ್ರೀಲಿ, ಜೇನ್ ಕುಡ್ದಂಗೆ ನ್ಯೆಕ್ಕಂಡ್ ನ್ಯೆಕ್ಕಂಡ್
ರಕ್ತ ಹೀರ್ತಾನ್ ಬೋಳೀ ಮಗ
ನಾನೇನ್ ಸೂಳೀಗಾರಿಕೆ ಮಾಡ್ತೀನಂದ್ಕಂಡವ್ನಾ;
ನಾನೂವೇ 21ನೇ ಸತಮಾನಕ್ ಬಂದಿವ್ನಿ
ಆದ್ರೂ ಇಂಗ್ಲಿಸ್ ಕಲಿಯಾಕಿಲ್ಲ,ಕನ್ನಡ ಬರಿಯಾಕಿಲ್ಲ,
ಇದ್ಯೆ ಬುದ್ದಿ ಕಲ್ಸಾಕೊಬ್ರೂ ಇಲ್ಲ
ಸರಿಯಾಗ್ ಹೊಟ್ಟೆಗ್ ಕೂಳೂ ಇಲ್ಲ
ಎಲ್ಲಿಗ್ ಬಂದ್ರೇನು ಎಲ್ಲಿಗ್ ಹೋದ್ರೇನು
ಇಂಚಿಂಚ್ಯಾಗ್ ಸೋಸಿಸ್ತ್ಯಾರ ಈ
ಸ್ರೀಮಂತ್ ತಲೆಹಿಡುಕ್ರು

ಒಂದೊಂದು ಸತ್ತಿ ಅದ್ಯೇನ್
ಕೂಗ್ತಾದೋ ಮೈಕಾಗ ಓಟು ಕೊಡಿ
ಓಟು ಕೊಡಿ ಉಣ್ಣಾಕಿಕ್ತೀನಿ, ಕುಡಿಯಾಕಿಕ್ತೀನಿ
ಬಟ್ಟಿ, ಬರೀ ಹಂಗಾ ಬೇಕಾದ್ದೆಲ್ಲಾ,
ಕೊಡ್ತೀನಿ ಅಂತಾನಾ ಬೋಳೀಗಂಡ
ಅವತ್ ರಾತ್ರೀ ಮಾತ್ರ ಕುಡಿಯಾಕೆ ತಿನ್ನಾಕೆ
ಓಟ್ ಹಾಕಿದ್ ಮ್ಯಾಕೆ ಆಸಾಮಿ
ಅದ್ಯಲ್ ಹೋಗ್ ಬಿದ್ಕಂತದೋ
ಬೇವರ್ಸಿನ್ ತಂದು ಇಂತಾವಕ್
ನಾವ್ ಓಟ್ ಹಾಕ್ಬೇಕು

ಏಯ್ ರಾಜ್ಕಾರಣಿಗ್ಳಾ ಯಾವ್
ಸೂಳೀ ಮನೀಗ್ ಹೋಗ್ ಮನೀಕಂಡೀರೋ
ಬರ್ರಲೋ ಹೊರಗ್ ಬರ್ರೋ ನಮ್ಮೂರ್ನ್ಯಾಗಿನ್
ಬಡವ್ರ್ ಕಸ್ಟ ವಸಿ ನೋಡ್ ಬರ್ರೋ
ಓಟ್ ಕೇಳಾಕ್ ಬಂದಾಗ ಮಿಂಡ್ರಿ ಆಟ ಆಡ್ತೀರಾ
ಈಗ್ಮೆತ್ತನ್ ಸೀಟ್ನ್ಯಾಗ್ ಕುಂತ್ಕಂಡು
ಲಾಗ ಹೊಡೀತೀರೇನ್ರಲೇ
ಬಡವ ರೈತ ಕೂಲಿ ಮಣ್ಣು ಮಸಿಅಂತೀರಲ್ಲಾ,
ನಮ್ಮಟ್ಟಿ ವಳಕ್ಕೂ ವಸಿ ಬನ್ರಲೋ
ಉದ್ಧಾರ ಮಾಡ್ತೀವಿ ಉದ್ಧಾರ ಮಾಡ್ತೀವಿ
ಅಂತ ಮನೆ ಮೇಲ್ ಮನೆ ಕಟ್ಕಂತೀರೇನ್ರೋ
ಅದೇನ್ ಬಂದೈತೆ ನಿಮ್ಗೆ ದೊಡ್ ರೋಗ
ನಿಮ್ ನಾಲ್ಗೆ ಮೇಲೆ ಅದ್ಯಾವ್ ಸರಸ್ವತೀ
ಕುಂತ್ಕಂಡಿದಾಳ್ಲೇ ವಸೀ ನಮ್ಕಡೆಗೂ
ನೋಡ್ರೋ, ನಮ್ಮಟ್ಟೀನೂ ಉದ್ಧಾರ ಮಾಡ್ರೋ
ಹುಚ್ಚು ಮುಂಡೇಗ್ಳಾ..!

Tuesday, April 7, 2009

ದಿಬ್ಬಣದ ಶೀರ್ಷಿಕೆ ಗೀತೆ ಯಾಕೋ ಕಾಡುತ್ತಿದೆ

ಯಾಕೋ ದಿಬ್ಬಣ ಧಾರವಾಹಿಯ ಟ್ರಯಲರ್ ಝೀ ಕನ್ನಡ ವಾಹಿನಿಯಲ್ಲಿ ಕಣ್ಣಿಗೆ ಬಿದ್ದಾಗಿನಿಂದಲೂ ಅದರ ಶೀರ್ಷಿಕೆ ಗೀತೆ ಬಹಳವಾಗಿ ಕಾಡುತ್ತಿತ್ತು. ಈಗಲೂ ಅಷ್ಟೇ. ಹೌದು ಅಂತಹದ್ದೇನಿದೆ ಅದರಲ್ಲಿ.

ದಿಬ್ಬಣದ ಶೀರ್ಷಿಕೆ ಸಾಹಿತ್ಯ ರಚಿಸಿದವರು ಸುದೇಶ್ ಮಹಾನ್. ನೀವೂ ಒಂದ್ಸಾರಿ ಇದನ್ನ ಓದಿ ಇದರೊಳಗೆ ಒಳಗೊಳಗೆ ಹುದುಗಿರುವ ಅರ್ಥಗಳನ್ನು ಬಿಚ್ಚಿಡುವಿರಾ?

ಭಾವದೊಳು ಹುಟ್ಟಿ
ಭವವನೆ ಮೆಟ್ಟಿ
ಪೊರೆ ಕಳೆದು ಕುಣಿಯುವುದು
ಜೀವ ಜಂತು

ಕತ್ತಲೊಳಗಿನ ಕಾವ್ಯ
ಇರುಳ ಎದೆಯನೆ ಬಗಿದು
ನೆನಪ ನೆತ್ತರ ಕುಡಿದು
ಬಸಿರಾತದು ಎಂತು

ಗರ್ಭದಾಳದ ಮಣ್ಣು
ಬಿಸಿಯುಸಿರ ಹಾಲು
ಎದೆಯ ಕಾವಲಿ ಹೂವ
ಅರಳಿಸುವ ಮಾಯೆ

ನೆಲ ಮುಗಿಲ
ಕರುಳ ಬಳ್ಳಿ ತಾಯೆ

'ಎದೆಯ ಕಾವಲಿ ಹೂವ ಅರಳಿಸುವ ಮಾಯೆ' ಸಾಲು ಕೇಳಿದಾಕ್ಷಣ ಪಕ್ಕನೆ ನೆನಪಾಗಿದ್ದು ಐರ್ಲೆಂಡ್ ಕವಿ ವಿಲಿಯಮ್ ಬಟ್ಲರ್ ಯೇಟ್ಸನ ಈಸ್ಟರ್ 1916 ಕವಿತೆಯಲ್ಲಿನ 'ಎ ಟೆರಿಬಲ್ ಬ್ಯೂಟಿ ಈಸ್ ಬಾರ್ನ್' ಎಂಬ ಸಾಲು. ಅಲ್ಲಿ ಕವಿ ದಂಗೆಯಲ್ಲಿ ರುದ್ರ ರಮಣೀಯತೆ ಕಾಣುತ್ತಾನೆ. ಹಾಗೆನೇ ಇಲ್ಲಿ ಕ್ರೌರ್ಯವೂ, ಮೃದುತ್ವದ ಭಾವವೂ ಕಾಣಿಸುತ್ತದೆ. ಮೊದ ಮೊದಲಿಗೆ ಕ್ರೌರ್ಯ.. ಗೀತೆಯ ಕೊನೆಯ ಸಾಲುಗಳಲ್ಲಿ ಅನಿಶ್ಚಿತ ಹೃದಯಸ್ಪರ್ಶಿ ಮೃದುತ್ವ ಗೋಚರಿಸುತ್ತದೆ.
ಪ್ರಸಕ್ತ ಕಾಲಘಟ್ಟದಲ್ಲಿನ ಜೀವನವೆಂಬ ದಿಬ್ಬಣದಲ್ಲಿ ಕ್ರೌರ್ಯವೇ ತುಂಬಿದೆ. ಪ್ರತಿಯೊಬ್ಬರಲ್ಲೂ ಸ್ವಾರ್ಥ. ಮಗುವಾಗಿದ್ದಾಗ ಮುಗ್ಧ ಕನಸುಗಳೊಂದಿಗೆ ಆಟವಾಡುತ್ತಾ ಅವನಷ್ಟಕ್ಕೇ ಬೆಳೆಯುತ್ತಿದ್ದವನು ಯುವಕನಾಗುತ್ತಲೇ ಮೆರೆಯುತ್ತ ತನಗಿಷ್ಟ ಬಂದಂತೆ ವರ್ತಿಸಿ ಮತ್ತೆ ವಯಸ್ಸಾಗುತ್ತಾ ವೃದ್ಧಾಪ್ಯ ಆವರಿಸಿದಂತೆ ತಾನು ಮಾಡಿದ ಹಳೇ ಪಾಪ ಕರ್ಮಗಳನ್ನು ನೆನೆಯುತ್ತಾ ಕೊರಗಿ ಕೊನೆಗಾಲದಲ್ಲಿ ಜ್ಞಾನೋದಯವಾಗಿ ಮನಸ್ಸು ಮೆತ್ತಗಾಗುವ ಪ್ರಕ್ರಿಯೆ ಇದರಲ್ಲಿ ಗೋಚರವಾಗುತ್ತಿದೆ.
ನಿಮಗೆ ಬೇರೆಯದೇ ರೀತಿಯಲ್ಲಿ ಇದು ಕಾಣಿಸಿರಬಹುದು ಹಾಗಾದಲ್ಲಿ ಪ್ರತಿಕ್ರಿಯೆಯಲ್ಲಿ ಅದನ್ನೆಲ್ಲಾ ಬರೆಯಿರಿ...

Saturday, April 4, 2009

ಸುರಿವ ಒಲುಮೆಯಾ ಮಳೆಯೇ 'ಬರಾನ್'

'ಬರಾನ್'
ನಿರ್ದೇಶಕ: ಮಜೀದ್ ಮಜೀದಿ
ಭಾಷೆ: ಪರ್ಷಿಯನ್,
ದೇಶ: ಇರಾನ್
ಅವಧಿ: 94 ನಿಮಿಷ

ಸಾಮಾಜಿಕ ಕಟ್ಟುಪಾಡುಗಳ ಮಧ್ಯೆ ಚಿತ್ರಿತವಾದ ಒಂದು ಸುಂದರ ಪ್ರೇಮಕಾವ್ಯವೇ ಬರಾನ್. ಪರ್ಷಿಯನ್ ಭಾಷೆಯಲ್ಲಿ ಬರಾನ್ ಎಂದರೆ ಮಳೆ ಎಂಬ ಅರ್ಥ. ಆದ್ದರಿಂದ ಮಳೆ ಚಿತ್ರ ಇರಾನ್ನಲ್ಲಿ 2001ರಲ್ಲೇ ಬಿಡುಗಡೆಗೊಂಡಿದೆ. ಆದರೆ ಇದು ಎಂಗೇಜ್ಮೆಂಟ್ ಆಗಿರುವ ಹುಡುಗಿಯನ್ನು ಪ್ರೀತಿಸಿ, ಪ್ರೀತಿ ಮಧುರ ತ್ಯಾಗ ಅಮರ ಎಂದು ಸಂದೇಶ ಸಾರುವ ಚಿತ್ರವಂತೂ ಖಂಡಿತಾ ಅಲ್ಲ. ಇಲ್ಲಿ ಬರಾನ್ ನಾಯಕಿಯ ಹೆಸರು ಆಕೆಗೆ ಹಲವಾರು ಸಾಮಾಜಿಕ ಕಟ್ಟುಪಾಡುಗಳಿವೆ, ಅಷ್ಟೇ ಏಕೆ ಹೆಣ್ಣಿಗೆ ಇಲ್ಲಿ ಮಾತನಾಡುವ ಸ್ವಾತಂತ್ರ್ಯವೂ ಇಲ್ಲ. ವೈಚಾರಿಕ ದೃಷ್ಟಿಯಿಂದ ಚಿತ್ರ ನೋಡುಗನನ್ನು ಚಿಂತನೆಗೆ ಹಚ್ಚಿದರೆ ಭಾವನಾತ್ಮಕವಾಗಿ ಮನ ಮುಟ್ಟುತ್ತದೆ. ಇದರಲ್ಲಿ ಹದಿಹರೆಯದ ಮನಸುಗಳ ತಲ್ಲಣವಿದೆ, ಪ್ರತಿಯೊಬ್ಬರ ಮನದಲ್ಲೂ ಸ್ನೇಹಿತನಿದ್ದಾನೆ, ಅವರೆಲ್ಲರಲ್ಲೂ ಸಹಕಾರಿ ಮನೋಭಾವವಿದೆ. ದೃಶ್ಯದಾಳದಲ್ಲಿ ಆಧ್ಯಾತ್ಮಿಕ ಸೆಲೆಯೂ ಇದೆ. ಈ ಚಿತ್ರ ಹಲವಾರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.

ರಷ್ಯಾದ ಕಡೆಯಿಂದ ಯುದ್ಧ ಮತ್ತು ತಾಲಿಬಾನರ ಬೆದರಿಕೆಯಿಂದ ಅತಂತ್ರರಾದ ಅಫಘಾನಿಸ್ತಾನ ಪ್ರಜೆಗಳು ಇರಾನ್ಗೆ ವಲಸೆ ಬಂದು ಅಲ್ಲಿನ ನಿರಾಶ್ರಿತರ ಶಿಬಿರದಲ್ಲಿ ವಾಸಿಸುತ್ತಾ ತಮ್ಮ ಜೀವನದ ಬಂಡಿಯನ್ನು ಸಾಗಿಸಲು ಯಾವ ರೀತಿ ಹೆಣಗಾಡುತ್ತಿರುತ್ತಾರೆ ಎಂಬುದು ಚಿತ್ರದ ಮೂಲ ಕಥಾವಸ್ತು.ಅಫಘಾನಿಸ್ತಾನದ ನಿರಾಶ್ರಿತರು ಅಧಿಕೃತ ಗುರುತಿನ ಚೀಟಿಯಿಲ್ಲದೆ ನಿರಾಶ್ರಿತರ ಶಿಬಿರದಿಂದ ಹೊರಹೋಗಬಾರದೆಂಬ ನಿಯಮ ಅಲ್ಲಿನದ್ದು. ಆದರೆ ಬದುಕು ಸಾಗಿಸಲು ದುಡಿಮೆ ಅನಿವಾರ್ಯ ಇದರ ಲಾಭ ಪಡೆವ ಕಂಟ್ರ್ಯಾಕ್ಟರ್ಗಳು ಕಡಿಮೆ ಸಂಬಳಕ್ಕೆ ಈ ನಿರಾಶ್ರಿತರನ್ನು ದುಡಿಸಿಕೊಳ್ಳುತ್ತಾರೆ.

ಚಿತ್ರದಲ್ಲಿ ಮೆಮರ್ ಎಂಬ ಕಟ್ಟಡ ನಿರ್ಮಾಣ ಕಂಟ್ರ್ಯಾಕ್ಟರ್ ಕೈಕೆಳಗೆ ಕೆಲ ನಿರಾಶ್ರಿತರು ದುಡಿಯುತ್ತಿರುತ್ತಾರೆ. ಸ್ಥಳೀಯ ಯುವಕ ಲತೀಫ್ನನ್ನು ಆತನ ತಂದೆ ಕೆಲಸಕ್ಕೆಂದು ಮೆಮರ್ ಬಳಿ ಬಿಟ್ಟುಹೋಗಿರುತ್ತಾನೆ. ಚಿತ್ರದ ನಾಯಕ ಲತೀಫ್ ಕಟ್ಟಡದಲ್ಲಿ ಕೆಲಸ ಮಾಡುತ್ತಿರುವವರಿಗೆ ಚಾ, ಮಾಡಿಕೊಡುವ ಹಾಗೂ ಬ್ರೆಡ್ ಬನ್ಗಳನ್ನು ಅಂಗಡಿಯಿಂದ ತಂದುಕೊಡುವ ಆರಾಮದಾಯಕ ಕೆಲಸ ಮಾಡಿಕೊಂಡಿರುತ್ತಾನೆ. ಲತೀಫ್ ಬಿಸಿ ರಕ್ತದ ಯುವಕ ವಾಚಾಳಿ, ಒಂದರ್ಥದಲ್ಲಿ ಅಖಾಡಕ್ಕಿಳಿಸಿದ ಕೊಬ್ಬಿದ ಹುಂಜದಂತೆ, ಆದರೆ ದುಡ್ಡಿನ ವಿಷಯದಲ್ಲಿ ಮಾತ್ರ ಬಹಳ ನಾಜೂಕು ಪ್ರತಿಯೊಂದು ಪೈಸೆಯನ್ನೂ ಕೂಡಿಡುತ್ತಾನೆ. ದುಡ್ಡಿನ ವಿಷಯದಲ್ಲಿ ಮೆಮರ್ಗೆ ಈತನ ಮೇಲೆ ನಂಬಿಕೆಯಿಲ್ಲ ಎಲ್ಲಿ ಖರ್ಚು ಮಾಡಿಬಿಡುತ್ತಾನೋ ಎಂದು ಆತನ ವರ್ಷದ ಸಂಬಳವೆಲ್ಲವನ್ನೂ ತಾನೇ ಕೂಡಿಟ್ಟಿರುತ್ತಾನೆ.

ಆಫ್ಘನ್ ಪ್ರಜೆ ನಜಾಫ್ ಎಂಬಾತ ಕಟ್ಟಡದ ಎರಡನೇ ಮಹಡಿಯಿಂದ ಬಿದ್ದು ಕಾಲು ಮುರಿದುಕೊಂಡಿರುತ್ತಾನೆ. ಕಾಲು ಮುರಿದುಕೊಂಡ ನಜಾಫ್ ತನ್ನ ಬದಲಿಗೆ ಮಗನನ್ನು ಸ್ನೇಹಿತನೊಡನೆ ಮೆಮರ್ ಬಳಿ ಕಳುಹಿಸುತ್ತಾನೆ. ಮಗ ರೆಹಮತ್ ತುಂಬಾ ಸಣಕಲು ವ್ಯಕ್ತಿ ಕ್ಲಿಷ್ಟಕರ ಕೆಲಸ ಆತನಿಂದ ಸಾಧ್ಯವಾಗುವುದಿಲ್ಲ ಆದ್ದರಿಂದ ಮೆಮರ್ ಆತನಿಗೆ ಅಡಿಗೆ ಮಾಡಿ ಮುಸುರೆ ತಿಕ್ಕುವ ಲತೀಫ್ನ ಕೆಲಸ ಕೊಡುತ್ತಾನೆ. ತನ್ನ ಆರಾಮದಾಯಕ ಕೆಲಸ ಕಿತ್ತುಕೊಂಡನಲ್ಲ ಎಂದು ಲತೀಫ್ಗೆ ಆತನ ಮೇಲೆ ಕೋಪವಿರುತ್ತದೆ, ಅಡಿಗೆ ಸಾಮಾನು ತರಲೆಂದು ಅಂಗಡಿಗೆ ಹೋಗುವಾಗ ಲತೀಫ್, ರೆಹಮತ್ ಕೆನ್ನೆಗೊಂದು ಬಲವಾಗಿ ಏಟು ಕೊಡುತ್ತಾನೆ ನಂತರ ಪದೇ ಪದೇ ತನ್ನ ಕುಚೇಷ್ಟೆಗಳಿಂದ ಒಂದಲ್ಲಾ ಒಂದು ರೀತಿಯಲ್ಲಿ ರೆಹಮತ್ಗೆ ಕಷ್ಟ ಕೊಡುತ್ತಿರುತ್ತಾನೆ.

ಇದೇ ಸಂದರ್ಭದಲ್ಲಿ ಲತೀಫ್ಗೊಂದು ಸತ್ಯ ತಿಳಿದುಬಿಡುತ್ತೆ. ರೆಹಮತ್ ಆಗಿ ಬಂದವನು ನಜಾಫ್ನ ಮಗ ಅಲ್ಲ ಮಗಳು ಬರಾನ್. ಕೆಲಸಕ್ಕಾಗಿ ವೇಷಮರೆಸಿಕೊಂಡಿದ್ದಾಳೆ ಎಂಬ ವಿಚಾರ ತಿಳಿದಂತಯೇ ಈತನ ಮನದಲ್ಲಿ ಏನೋ ಒಂದು ರೀತಿಯ ತಳಮಳ, ತಲ್ಲಣ. ಪ್ರೀತಿಯ ಭಾವನೆ, ಅನುಕಂಪದ ಸೆಲೆ ಎಲ್ಲವೂ ಒಟ್ಟಿಗೇ ಮೂಡಿ ಆಕೆಗೆ ಬೆಂಗಾವಲಾಗುತ್ತಾನೆ. ಯಾರೇ ಆಕೆಯೊಡನೆ ಜಗಳಕ್ಕೆ ನಿಂತರೂ ಈತ ಅವಳ ಪರವಾಗಿ ಜಗಳವಾಡುತ್ತಾನೆ.ಆದರೆ ಆಗಾಗ ಅಲ್ಲಿಗೆ ಚೆಕ್ಕಿಂಗ್ಗೆಂದು ಇರಾನ್ ಇನ್ಸ್ಪೆಕ್ಟರ್ಗಳು ಬರುತ್ತಿರುತ್ತಾರೆ, ರೆಹಮತ್ ಅವರಿಗೆ ಕಾಣಿಸುತ್ತಾನೆ ಆದರೆ ಲತೀಫ್ ರಹಮತ್ನನ್ನು ರಕ್ಷಿಸಿ ಜೈಲಿಗೆ ಹೋಗುತ್ತಾನೆ. ಆಫ್ಘನ್ ನಿರಾಶ್ರಿತರು ಕೆಲಸ ಮಾಡುವ ವಿಚಾರ ಇನ್ಸ್ಪೆಕ್ಟರ್ಗಳಿಗೆ ತಿಳಿದ ಕಾರಣ ಮೆಮರ್ ಎಲ್ಲ ಆಫ್ಘನ್ ಕೆಲಸಗಾರನ್ನು ಬಿಡಬೇಕಾಗಿ ಬರುತ್ತದೆ.

ಬರಾನ್ ಬೇರೆಲ್ಲೋ ಕೆಲಸಕ್ಕೆ ಸೇರಿದ್ದಾಳೆ ಎಂಬ ಸುದ್ದಿ ನಜಾಫ್ನ ಸ್ನೇಹಿತನಿಂದ ಲತೀಫ್ಗೆ ತಿಳಿಯುತ್ತೆ, ಈತ ಬರಾನ್ನನ್ನು ಹುಡುಕಿಕೊಂಡು ನಿರಾಶ್ರಿತರ ಶಿಬಿರದತ್ತ ಬರುತ್ತಾನೆ ಕೊನೆಗೂ ಆಕೆ ಕೆಲಸ ಮಾಡುವ ಜಾಗ ಕಂಡು ಹಿಡಿಯುತ್ತಾನೆ ಆಕೆಗೆ ಗೊತ್ತಾಗದಂತೆ ಕದ್ದು ಆಕೆಯನ್ನು ನೋಡುತ್ತಾನೆ ನದಿಯಿಂದ ಕಲ್ಲು ಹೊತ್ತು ಹಾಕುವ ಕೆಲಸದಲ್ಲಿ ಆಕೆ ಕಷ್ಟಪಡುವುದನ್ನು ಕಂಡು ಮರುಗುತ್ತಾನೆ. ನಜಾಫ್ಗೆ ಸಹಾಯ ಮಾಡಬೇಕೆಂಬ ಉದ್ದೇಶದಿಂದ ಮೆಮರ್ಗೆ ಏನೋ ಸುಳ್ಳು ಹೇಳಿ ತನ್ನ ವರ್ಷದ ಸಂಬಳವನ್ನು ತಂದು ನಜಾಫ್ನ ಸ್ನೇಹಿತನಲ್ಲಿ ಕೊಟ್ಟು ನಜಾಫ್ಗೆ ಕೊಡುವಂತೆ ತಿಳಿಸುತ್ತಾನೆ ಆದರೆ ಆತ ಲತೀಫ್ಗೆ ಪತ್ರ ಬರೆದಿಟ್ಟು ಹಣದೊಡನೆ ಆಫ್ಘನ್ಗೆ ತೆರಳುತ್ತಾನೆ, ಕೊನೆಗೆ ಲತೀಫ್ ತನ್ನ ಗುರುತಿನ ಚೀಟಿ ಮಾರಿ ಹಣ ಪಡೆದು ನಜಾಫ್ಗೆ ಕೊಡುತ್ತಾನೆ.

ಅವರು ಹಣಪಡೆದ ಮರುದಿನವೇ ಅಫಘಾನಿಸ್ತಾನಕ್ಕೆ ತೆರಳುವುದೆಂದು ತೀರ್ಮಾನಿಸುತ್ತಾರೆ. ಬೆಳಗ್ಗೆ ಟ್ರಕ್ಗೆ ಸಾಮಾನು ಸರಂಜಾಮುಗಳನ್ನು ತುಂಬಿಸಲು ಲತೀಫ್ ನಜಾಫ್ಗೆ ಸಹಾಯ ಮಾಡುತ್ತಾನೆ, ಬರಾನ್ಗೆ ಆತನ ಸಹಕಾರಿ ಮನೋಭಾವ ಕಂಡು ಏನೋ ಒಂದು ರೀತಿಯ ಒಲುಮೆ. ಅದೊಂದು ಕೊನೆಯ ದೃಶ್ಯ ಬರಾನ್ ಟ್ರಕ್ ಹತ್ತಲು ಹೋಗುತ್ತಿರಬೇಕಾದರೆ ಕೆಸರಿನಲ್ಲಿ ಬೂಟು ಹೂತು ಹೋಗುತ್ತೆ ಲತೀಫ್ ಅದನ್ನು ಎತ್ತಿ ಆಕೆ ಕಾಲಿಗೆ ತೊಡಿಸುತ್ತಾನೆ ಆದರೆ ಬೂಟಿನ ಅಚ್ಚು ಕೆಸರಿನಲ್ಲಿ ಅಚ್ಚಾಗುತ್ತದೆ ಲತೀಫ್ ಮನದಲ್ಲಿ ಅದು ಅಚ್ಚಳಿಯದ ನೆನಪಾಗುತ್ತದೆ. ಕೊನೆಯಲ್ಲಿ ಬರಾನ್ (ಮಳೆ) ಬರುವುದರೊಂದಿಗೆ ಇವರ ಪ್ರೀತಿಗೆ ಸಾಕ್ಷಿಯಾಗುತ್ತಾಳೆ.

Saturday, March 28, 2009

ಬಡವ್ರು ನಾವು

ನಾವ್ ಬಡವ್ರೀ
ರೈತಾಪಿ ಜನ್ರು
ಕಾಣಾಕಿಲ್ಲ ನಮ್ ಬ್ಯೆವ್ರು
ರಕ್ತದ್ ಕಾರಂಜಿಗ್ಳವು,
ಯಾರ್ ಕಾಣ್ತಾರ್ ನಮ್
ಹಸಿದ್ ಹೊಟ್ಟೆ, ಹರಿದ್ ಬಟ್ಟಿ
ಮನ್ಸನ್ಗೆ ಕುಲ್ಡು ಬಡಿದೈತೆ
ಕಣ್ಗಲ್ಲ ಮನ್ಸಿಗೆ, ಹೃದಯಕ್ಕೆ...
ಝಣ ಝಣ ಮಣ ಮಣ
ಕೈಯಾಗ್ ಹ(ಹೆ)ಣ ಭಾರ, ಇಡಾಕ್
ಜಾಗಿಲ್ಲ, ಆದ್ರೂ ಅದ್ನೇ ಹಾಸ್ಗೆ
ಮಾಡ್ ಬಿದ್ಕಂತವೆ ಧನ ಪಿಶಾಚಿಗ್ಳು
ಜೊತಿಗ್ ಬೆತ್ಲೆ ಕುಣೀಕೆ ಲಲನಾಮಣೀರು
ಕುಡಿಯಾಕ್ ಎಣ್ಣೆ ಪಾನ್ಕ
ಕಡಿಯಾಕ್ ಕೊಕ್ಕೊಕ್ಕೋ ಮೋದ್ಕ
ನಿದ್ದೇನೇ ಕಾಣದ್ ರಾತ್ರಿಗ್ಳು
ಬಡವ್ರ್ಗೊಂತರಾ
ಸ್ರೀಮಂತರ್ಗೊಂತರಾ...
ತಾರತಮ್ಯದ್ ಬದ್ಕೇ
ನಮ್ ದ್ಯೇಸದ್ ಪ್ರಜಾಪ್ರಭುತ್ವ್
ಹ್ಞಾ.. ಭೂತ ಹೊಕ್ಕೈತೆ
ವಿಕೃತ ಮನಸಿನ್ಯಾಗಿನ ತಲಿಯೊಳಗೆ
ಭ್ರಷ್ಟಾಚಾರೀ ರಾಜ್ಕಾರಣಿಗ್ಳು, ಸರಕಾರಿ ಅಧಿಕಾರಿಗ್ಳು...
ಯಾವ್ ಮ್ಯೇಜಿನ್ ಕ್ಯೆಳ್ಗೆ ಅದೇನ್ ಚಾಚ್ಕಂತಿದಾರೋ
ಮಂಚದ್ ಮ್ಯಾಲೆ ಯಾರ್ ಜೊತಿಗ್ ಪಾಚ್ಕಂತಿದಾರೋ
ಯಾರಿಗ್ಗೊತ್ತು...!

Friday, March 27, 2009

ಇದು ಪೊಸಡಿಗುಂಪೆ





ಪ್ರಕೃತಿ ಸೊಬಗಿನ ರಮ್ಯಮನೋಹರ ದೃಶ್ಯ ಇಲ್ಲಿ ನಮ್ಮ ಕಣ್ಮನ ಸೆಳೆಯುತ್ತದೆ. ನಾವು ಇಲ್ಲಿ ಒಂದೇ ನೋಟದಲ್ಲಿ ಅರಬ್ಬೀ ಸಮುದ್ರವನ್ನೂ ಪಶ್ಚಿಮ ಘಟ್ಟವನ್ನೂ ವೀಕ್ಷಿಸಬಹುದು. ಇದು ಪೊಸಡಿಗುಂಪೆ. ಈ ತಾಣ ಕನರ್ಾಟಕದ ಗಡಿನಾಡು ಕಾಸರಗೋಡು ಜಿಲ್ಲೆಯಲ್ಲಿದೆ.
ಇಲ್ಲಿನ ಮಂಜೇಶ್ವರದಿಂದ ಪೂರ್ವಕ್ಕೆ 16 ಕಿ.ಮೀ ಸಂಚರಿಸಿದರೆ ಪೊಸಡಿಗುಂಪೆ ತಲುಪಬಹುದು. ಇದು ಸಮುದ್ರ ಮಟ್ಟದಿಂದ 1060 ಮೀ. ಎತ್ತರದಲ್ಲಿದೆ. ಗುಡ್ಡದ ತುದಿಯಲ್ಲಿ ನಿಂತು ಪೂರ್ವಕ್ಕೆ ಮುಖ ಮಾಡಿದರೆ ಕುದುರೆಮುಖ, ಕುಮಾರಪರ್ವತ ಹೀಗೆ ಅಸಂಖ್ಯಾತ ಬೆಟ್ಟಗುಡ್ಡಗಳು ಕಣ್ಮುಂದೆ ನಿಲ್ಲುತ್ತವೆ. ಪಶ್ಚಿಮಕ್ಕೆ ತಿರುಗಿದರೆ ಅರಬ್ಬೀ ಸಮುದ್ರ ಕಾಣಸಿಗುತ್ತದೆ.
ಸೂರ್ಯನ ರಶ್ಮಿಗಳು ಸಮುದ್ರದ ಮೇಲೆ ಬಿದ್ದು ನೀರು ಪಳ ಪಳನೆ ಹೊಳೆಯುವ ದೃಶ್ಯ ನೋಡುವುದೇ ಒಂದು ಖುಷಿ. ಗುಡ್ಡದ ಮಡಿಲಿನಿಂದ ಅರ್ಧದವರೆಗೆ ಪಾರೆಕಲ್ಲುಗಳೇ ತುಂಬಿಕೊಂಡಿವೆ. ತಪ್ಪಲನ್ನು ತಲುಪುತ್ತಿದ್ದಂತೆ ಮಣ್ಣನ್ನು ಕಾಣಬಹುದು ಅಲ್ಲಿಯವರೆಗೆ ಪಾರೆ ಕಲ್ಲಿನ ಮೇಲೆ ಕಸರತ್ತು ನಡೆಸಿಕೊಂಡು ಗುಡ್ಡ ಏರಬೇಕು. ಈ ಪಾರೆಕಲ್ಲುಗಳು ಕೆಲವೊಮ್ಮೆ ಪಕೃತಿಯೇ ನಿಮರ್ಿಸಿದಂತಹ ಸುಂದರ ಕೆತ್ತನೆಗಳಂತೆ ಗೋಚರಿಸುತ್ತವೆ. ಬೇರೆ ಬೇರೆ ಕೋನಗಳಿಂದ ಅದನ್ನು ವೀಕ್ಷಿಸಿದರೆ ಹೊಸ ಹೊಸ ಅರ್ಥಗಳನ್ನು ನೀಡುವ ಆಧುನಿಕ ಕಲಾಕೃತಿಗಳಂತೆ ಕಾಣುತ್ತವೆ. ಬೇಸಿಗೆಯಲ್ಲಿ ಪಾರೆಕಲ್ಲಿನ ಮೇಲೆ ಪಾರೆ ಹೂ ಕಾಣಬಹುದು. ಅಂತಯೇ ಪಾರೆ ಮುಳ್ಳುಗಳೂ ಇಲ್ಲಿವೆ.
ಇಲ್ಲಿನ ಮತ್ತೊಂದು ವಿಶೇಷವೆಂದರೆ ಗುಡ್ಡದ ಕೆಳಗಿರುವ ಹಳ್ಳಿಗರು ಇದೇ ಪಾರೆ ಕಲ್ಲುಗಳಿಂದ ತಮ್ಮ ಭೂಮಿಗೆ ಕೋಟೆಗಳನ್ನು ಕಟ್ಟಿಕೊಂಡಿರುವುದು. ಗುಡ್ಡದ ತುದಿಯಿಂದ ವೀಕ್ಷಿಸುವಾಗ ಈ ಕೋಟೆಗಳು ಇರುವೆಗಳ ಸಾಲಿನಂತೆ ಗೋಚರಿಸುತ್ತವೆ. ಗುಡ್ಡದಲ್ಲಿ ಮೊಣಕಾಲೆತ್ತರಕ್ಕೆ ಹುಲ್ಲು ಬೆಳೆಯುತ್ತದೆ ಇಲ್ಲಿನ ಹಳ್ಳಿಗರು ಇದನ್ನು 'ಮುಳಿ ಹುಲ್ಲು' ಎನ್ನುತ್ತಾರೆ. ಈ ಹುಲ್ಲನ್ನು ಜಾನುವಾರುಗಳಿಗೆ ಮೇವಾಗಿ ಕೊಡುತ್ತಾರೆ ಹೆಚ್ಚಾಗಿ ಮಳೆಗಾಲದಲ್ಲಿ ಒಣಹುಲ್ಲು ಸಿಗದಿರುವುದರಿಂದ ಇದನ್ನು ಮಳೆಗಾಲಕ್ಕೆ ದಾಸ್ತಾನು ಮಾಡಿಟ್ಟುಕೊಳ್ಳುತ್ತಾರೆ. ಮುಳಿ ಹುಲ್ಲನ್ನು ಮನೆಯ ಮಾಡಾಗಿ ಬಳಸುವುದೂ ಇದೆ ಆದರೆ ಈಗ ಈ ಹುಲ್ಲಿನ ಮಾಡನ್ನು ಕಾಣುವುದು ಬಹಳ ವಿರಳ, ಕೆಲ ಕುಟುಂಬಗಳು ಹಟ್ಟಿಗೆ ಇದರ ಮಾಡನ್ನು ಕಟ್ಟಿರುವುದನ್ನು ಈಗ ಕಾಣಬಹುದು.
ಸಂಜೆ ಹೊತ್ತಿನಲ್ಲಂತೂ ಇಲ್ಲಿ ಕುಳಿತು ಸೂಯರ್ಾಸ್ತಮಾನ ನೋಡುವಾಗಿನ ಖುಷಿಯೇ ಬೇರೆ. ಮೋಡಗಳ ಹಿಂದೆ ಅವಿತು ಕಣ್ಣಾಮುಚ್ಚಾಲೆ ಆಡುವ ಸೂರ್ಯನ ಆಟದಲ್ಲಿ ರಶ್ಮಿಗಳು ಮೋಡಗಳೆಡೆಯಿಂದ ತೂರಿ ಬರುತ್ತವೆ. ಸೂಯರ್ಾಸ್ತಮಾನ ಹತ್ತಿರವಾಗುತ್ತಿದ್ದಂತೇ ಸಮುದ್ರ ಕೆಂಬಣ್ಣಕ್ಕೆ ತಿರುಗಿ ನಾಚಿಕೊಳ್ಳುವ ಪರಿಯನ್ನು ಖುದ್ದು ಅಲ್ಲಿಯೇ ವೀಕ್ಷಿಸಬೇಕು.

Sunday, November 16, 2008

'ಎ ವೆಡ್ನೆಸ್ಡೇ'

'ಆಪ್ ಕಾ ಘರ್ ಮೆ ಕಾಕ್ರೋಚ್ ಆಯೆ ತೊ ಆಪ್ ಕ್ಯಾ ಕರ್ತೇ ಹೇ.'
'ಐಯಾಮ್ ದ ಸ್ಟುಪಿಡ್ ಕಾಮನ್ ಮ್ಯಾನ್. ಒನ್ ಥಿಂಗ್ ಟು ಕ್ಲೀನ್ ಹಿಸ್ ಹೌಸ್'
'ಆನ್ ಎ ಫ್ರೈಡೇ ರಿಪೀಟೆಡ್ ಇಟ್ ಆನ್ ಥಸರ್್ಡೇ ಐಯಾಮ್ ರಿಪ್ಲೈಯಿಂಗ್ ಆನ್ ವೆಡ್ನೆಸ್ಡೇ'

ಹೌದು ನಾವೆಲ್ಲ ಸ್ಟುಪಿಡ್ ಕಾಮನ್ ಮ್ಯಾನ್ಗಳು ಅದರಲ್ಲಿ ಯಾವುದೇ ಸಂದೇಹವಿಲ್ಲ. ಕ್ಷಣ ಕ್ಷಣಕ್ಕೂ ಹೆದರಿಕೊಂಡು ಜೀವನ ಸಾಗಿಸೋ ಪುಕ್ಕಲರು. ಮನೆಯಿಂದ ಕಾಲು ಹೊರಗಡೆ ಇಡೋದಕ್ಕು ಹಲವು ಬಾರಿ ಚಿಂತಿಸೋರು. ಹೊರಗಡೆ ಹೋದ ಗಂಡ ಅಥವಾ ಮಕ್ಕಳು ಸರಿಯಾದ ಸಮಯಕ್ಕೆ ಬರದಿದ್ದರೆ ಏನಾಯಿತೋ ಎಂದು ಹೆದರಿ ಮೊಬೈಲ್ ಫೋನ್ಗೆ ಕಾಲ್ ಮಾಡೋರು. ಆಫೀಸಲ್ಲಿ ಕೂತು ಮನೇಲಿರೋ ಹೆಂಡತಿ, ಶಾಲೆಗೆ ಹೋದ ಮಗನ ಬಗ್ಗೆ ಚಿಂತೆ ಮಾಡೋ ಹೇಡಿಗಳು.
ಖಂಡಿತಾ ನಾವೀಗ ಪ್ರತಿಯೊಂದು ಕ್ಷಣಕ್ಕೂ ಹೆದರಿಕೊಂಡು ಜೀವನ ಮಾಡಬೇಕಾದ ಸ್ಥಿತಿ ನಿಮರ್ಾಣವಾಗಿದೆ. ಅದಕ್ಕೆ ಮುಖ್ಯ ಕಾರಣ ದೇಶದ್ರೋಹಿಗಳು. ಜಾತಿ ಮತದ ಹೆಸರಲ್ಲಿ ಇವರು ಹುಟ್ಟಿ ಹಾಕ್ತಾ ಇರೋ ಭಯೋತ್ಪಾದನೆಯಿಂದಾಗಿ ಸಾಮಾನ್ಯ ಮನುಷ್ಯನ ಜೀವನ ದುಸ್ತರವಾಗಿದೆ. ಆದರೆ ಅದೇ ಸಾಮಾನ್ಯ ಮನುಷ್ಯ ಸಿಡಿದೆದ್ದು ನಿಂತರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು 'ಎ ವೆಡ್ನೆಸ್ಡೇ' ಯಲ್ಲಿ ನೀರಜ್ ಪಾಂಡೆ ಅದ್ಭುತವಾಗಿ ಚಿತ್ರಿಸಿದ್ದಾರೆ. ಚಿತ್ರಕ್ಕೆ ತಕ್ಕಂತೆ ಸಾಮಾನ್ಯ ಮನುಷ್ಯನಾಗಿ ನಾಸಿರುದ್ದೀನ್ ಷಾ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಚಿತ್ರ ಕೊನೆಯವರೆಗೂ ಸಸ್ಪೆನ್ಸ್ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರೆ ಅದರಲ್ಲಿ ನಿದರ್ೇಶಕರ ಶ್ರಮ ಎದ್ದು ಕಾಣುತ್ತದೆ. ಸಂಭಾಷಣೆ ಎಂತಹವನನ್ನೂ ಬಡಿದೆಬ್ಬಿಸುತ್ತದೆ. ನಾಸಿರುದ್ದೀನ್ ಷಾ ಡೈಲಾಗ್ ಡೆಲಿವರಿ, ಆ ಡೈಲಾಗ್ನ ಗಂಭೀರತೆಯನ್ನು ಇಮ್ಮಡಿಗೊಳಿಸುತ್ತದೆ. ಪ್ರತಿಯೊಬ್ಬರೂ ನೋಡಲೇ ಬೇಕಾದ ಚಿತ್ರ.
ಗೆಳೆಯರೆ ನೀವೂ ಒಮ್ಮೆ ಈ ಚಿತ್ರ ನೋಡಿ ಆಮೆಲೆ ನಿಮ್ಮ ಅಭಿಪ್ರಯಾಯ ತಿಳಿಸಿ.
ಧನ್ಯವಾದಗಳು.

About This Blog

  © Blogger template Valentine by Ourblogtemplates.com 2008

Back to TOP