ಎರಡು ಕನಸು
ಭಯಾನಕ ಮತ್ತು ರೊಮ್ಯಾಂಟಿಕ್ ಕನಸುಗಳೆರಡು ಮಾತಾಡುತ್ತಿದ್ದವು.
ಭಯಾನಕ ಕನಸು: ನಿನ್ನೆ ರಾತ್ರಿ ಒಬ್ಬನನ್ನ ಹೇಗೆ ಹೆದರಿಸ್ದೆ ಗೊತ್ತಾ! ತುಂಬಿ ಹರಿವ ನದಿ ಮದ್ಯದಲ್ಲಿ ಅವನಿದ್ದಾನೆ ದಡದತ್ತ ಈಜುತ್ತಾ ಈಜುತ್ತಾ ಕೈಗಳು ಸೋತಿವೆ. ಎಷ್ಟೇ ಪ್ರಯತ್ನಿಸಿದರೂ ದಡ ಸಿಕ್ತಾನೇ ಇಲ್ಲ. ಜೋರಾಗಿ ಕಿರುಚುತ್ತಾನೆ, ಗಂಟಲಿಂದ ಸ್ವರವೇ ಹೊರಡುತ್ತಿಲ್ಲ. ಏಳೋದಕ್ಕೆ ಪ್ರಯತ್ನಿಸ್ತಾನೆ ಆದ್ರೆ ಏಳೋದಕ್ಕಾಗಲ್ಲ. ಯಾರೋ ಕಟ್ಟಿ ಹಾಕಿದಾಗಾಗುತ್ತೆ. ಹೆದರಿದ ಅವ್ನು ಕೊನೆಗೆ ಹಾಸ್ಗೇಲೇ ಉಚ್ಚೆ ಹೊಯ್ದ. ಹ್ಹ ಹ್ಹ ಹ್ಹ... ನೋಡು ನನ್ನ ಕಂಡ್ರೆ ಜನಕ್ಕೆಷ್ಟು ಭಯ. ಇದೊಂದು ಸಣ್ಣ ಸ್ಯಾಂಪಲ್ ಅಷ್ಟೆ. ಹೇ ಮೊನ್ನೆ ಯಡಿಯೂರಪ್ಪ ನನ್ನನ್ನ ನೋಡಿ ಮತ್ತೆರಡು ದಿನ ನಿದ್ದೇನೇ ಮಾಡ್ಲಿಲ್ಲ. ಬಳ್ಳಾರಿ ನಂಬರ್ ಪ್ಲೇಟ್ನ ಎರಡು ಬುಲ್ಡೋಜರ್ಗಳು ಕುಚರ್ಿಯನ್ನ ಹಾಗೇ ಎಳೀತಾ ಇದ್ವು. ಕುಚರ್ಿ ದಢಾಲ್ ಅಂತ ಮುರಿದೇ ಬಿಡ್ತು. ನೋಡು ಮುಖ್ಯಮಂತ್ರೀನೂ ನಂಗೆ ಹೆದರ್ತಾರೆ. ಈಗಿನ ಕಾಲದಲ್ಲಿ ಪ್ರೀತಿ ಅಲ್ಲ ಮುಖ್ಯ ಹೆದರಿಕೆ ಮುಖ್ಯ. ಹೆದರಿಕೆ ಇದ್ರೆ ಎಲ್ರೂ ಎಚ್ಚೆತ್ತುಕೊಂಡಿರುತ್ತಾರೆ. ಇಲ್ಲದಿದ್ದರೆ ಸೋಮಾರಿಗಳ ಥರ ಬಿದ್ಕೊಂಡಿರ್ತಾರೆ. ನಿನ್ನಿಂದಾಗಿ ಜಗತ್ತಲ್ಲಿರೋರೆಲ್ಲ ಹಾಳಾಗ್ತಿದ್ದಾರೆ. ಏನೇನೋ ಆಸೆಗಳನ್ನ ಅವರಲ್ಲಿ ಹುಟ್ಸಿ ಹೊಂಡಕ್ಕೆ ತಳ್ತೀಯ ಇದು ನಿಂಗೆ ಸರಿ ಕಾಣುತ್ತಾ?
ರೊಮ್ಯಾಂಟಿಕ್ ಕನಸು: ನಾನು ಕೂಡ ನಿನ್ನೆ ರಾತ್ರಿ ಹಾಯಾಗಿ ನಿದ್ರಿಸುತ್ತಿದ್ದ ಒಬ್ಬನ ನಿದ್ದೇಲಿ ಪ್ರವೇಶಿಸಿದ್ದೆ. ಆತನನ್ನ ಸುಂದರ ಉದ್ಯಾನದಲ್ಲಿ ಹೂವಿನ ಹಾಸಿಗೆ ಮೇಲೆ ಕೊಂಡೊಯ್ದೆ. ತಣ್ಣನೆ ಗಾಳಿ, ನವಿಲುಗರಿಯೊಂದು ಮೈ ಸೋಕಿ ಕಚಗುಳಿಯಿಡುತ್ತಿದೆ. ಸಮೀಪದಲ್ಲೇ ತಾವರೆ ಕೊಳ. ಅದರಲ್ಲಿ ಹಂಸಗಳು ಈಜಾಡುತ್ತಿವೆ. ಕೊಳದ ಪಕ್ಕದಲ್ಲೇ ಝರಿಯೊಂದು ಬುಝ್... ಎನ್ನುವ ಶ್ರುತಿಯೊಂದಿಗೆ ನೊರೆ ನೊರೆಯಾಗಿ ಧುಮ್ಮಿಕ್ಕುತ್ತಿದೆ. ಹೂವಿನ ತೋಟದಲ್ಲಿ ಮಲ್ಲಿಗೆ, ಗುಲಾಬಿಯಂತಹ ಜಗದೇಕ ಸುಂದರಿಯರು ಇಂಪಾಗಿ ಹಾಡುತ್ತಾ ಹೂವಿನ ಚೆಲುವಿಗೆ ಮರುಳಾಗಿದ್ದಾರೆ ಆತ ಅವರನ್ನೇ ನೋಡುತ್ತಾ ನೋಡುತ್ತಾ... ಆಹಾ. ಆತ ನನ್ನಿಂದ ಸಂತೋಷಗೊಂಡಿದ್ದಾನೆ. ಜಗದ ಸಾವಿರ ಸಾವಿರ ದುಃಖಗಳನ್ನೂ ಮರೆತು ನಿರಾಳನಾಗಿದ್ದಾನೆ. ಅವನ ಮನಸ್ಸಿನ ತುಂಬ ಪ್ರೀತಿ ತುಂಬಿಕೊಂಡಿದೆ.ಜಗತ್ತಲ್ಲಿ ಪ್ರೀತಿ ಇಲ್ಲದಿದ್ದರೆ ಎಲ್ಲವೂ ಶೂನ್ಯ. ನಿಜ ಜಗತ್ತಿನ ಜೊತೆ ಪ್ರತಿಯೊಬ್ಬ ಮನುಷ್ಯನೂ ಒಂದು ಕಲ್ಪನಾತ್ಮಕ ಜಗತ್ತು ಸೃಷ್ಠಿಸಿಕೊಂಡಿರ್ತಾನೆ. ಅದರಿಂದ ಅವ್ನು ಸೋಮಾರಿಯಾಗಲ್ಲ, ನಿರಾಳತೆ ಸಿಗುತ್ತೆ. ನಿನ್ನ ವಿಷ್ಯ ನಂಗೊತ್ತಿಲ್ವ. ಮೊನ್ನೆ ಯಾವ್ದೋ ಹಾಟರ್್ ಪೇಷೆಂಟ್ ನಿದ್ದೇಲಿ ಬಂದು ಅವನನ್ನೇ ಗೊಟಕ್ ಅನ್ನಿಸ್ಬಿಟ್ಟೆ. ಅವರೆಲ್ಲಾ ಏನು ಪಾಪ ಮಾಡಿ ನಿನ್ನಂತಹಾ ಪಾಪಿಯನ್ನ ಕಂಡ್ರೋ.ಲೋ ಮಹೀ ಏಳೋ ಬೆಳಿಗ್ಗೆ 9 ಗಂಟೆ ಆಯ್ತು ಅಂತ ಅಮ್ಮ ಹೇಳಿದಾಗ್ಲೆ ನಂಗೆ ಎಚ್ಚರ ಆಗಿದ್ದು. ಅಮ್ಮ ಬಂದು ಎಬ್ಬಿಸದೇ ಇದ್ದಿದ್ದರೆ ಅವರಿಬ್ಬರ ಕಾದಾಟ ಹಾಗೇಯೇ ಮುಂದುವರೀತಿತ್ತು!!!