ದಿಬ್ಬಣದ ಶೀರ್ಷಿಕೆ ಗೀತೆ ಯಾಕೋ ಕಾಡುತ್ತಿದೆ
ಯಾಕೋ ದಿಬ್ಬಣ ಧಾರವಾಹಿಯ ಟ್ರಯಲರ್ ಝೀ ಕನ್ನಡ ವಾಹಿನಿಯಲ್ಲಿ ಕಣ್ಣಿಗೆ ಬಿದ್ದಾಗಿನಿಂದಲೂ ಅದರ ಶೀರ್ಷಿಕೆ ಗೀತೆ ಬಹಳವಾಗಿ ಕಾಡುತ್ತಿತ್ತು. ಈಗಲೂ ಅಷ್ಟೇ. ಹೌದು ಅಂತಹದ್ದೇನಿದೆ ಅದರಲ್ಲಿ.
ದಿಬ್ಬಣದ ಶೀರ್ಷಿಕೆ ಸಾಹಿತ್ಯ ರಚಿಸಿದವರು ಸುದೇಶ್ ಮಹಾನ್. ನೀವೂ ಒಂದ್ಸಾರಿ ಇದನ್ನ ಓದಿ ಇದರೊಳಗೆ ಒಳಗೊಳಗೆ ಹುದುಗಿರುವ ಅರ್ಥಗಳನ್ನು ಬಿಚ್ಚಿಡುವಿರಾ?
ಭಾವದೊಳು ಹುಟ್ಟಿ
ಭವವನೆ ಮೆಟ್ಟಿ
ಪೊರೆ ಕಳೆದು ಕುಣಿಯುವುದು
ಜೀವ ಜಂತು
ಕತ್ತಲೊಳಗಿನ ಕಾವ್ಯ
ಇರುಳ ಎದೆಯನೆ ಬಗಿದು
ನೆನಪ ನೆತ್ತರ ಕುಡಿದು
ಬಸಿರಾತದು ಎಂತು
ಗರ್ಭದಾಳದ ಮಣ್ಣು
ಬಿಸಿಯುಸಿರ ಹಾಲು
ಎದೆಯ ಕಾವಲಿ ಹೂವ
ಅರಳಿಸುವ ಮಾಯೆ
ನೆಲ ಮುಗಿಲ
ಕರುಳ ಬಳ್ಳಿ ತಾಯೆ
'ಎದೆಯ ಕಾವಲಿ ಹೂವ ಅರಳಿಸುವ ಮಾಯೆ' ಸಾಲು ಕೇಳಿದಾಕ್ಷಣ ಪಕ್ಕನೆ ನೆನಪಾಗಿದ್ದು ಐರ್ಲೆಂಡ್ ಕವಿ ವಿಲಿಯಮ್ ಬಟ್ಲರ್ ಯೇಟ್ಸನ ಈಸ್ಟರ್ 1916 ಕವಿತೆಯಲ್ಲಿನ 'ಎ ಟೆರಿಬಲ್ ಬ್ಯೂಟಿ ಈಸ್ ಬಾರ್ನ್' ಎಂಬ ಸಾಲು. ಅಲ್ಲಿ ಕವಿ ದಂಗೆಯಲ್ಲಿ ರುದ್ರ ರಮಣೀಯತೆ ಕಾಣುತ್ತಾನೆ. ಹಾಗೆನೇ ಇಲ್ಲಿ ಕ್ರೌರ್ಯವೂ, ಮೃದುತ್ವದ ಭಾವವೂ ಕಾಣಿಸುತ್ತದೆ. ಮೊದ ಮೊದಲಿಗೆ ಕ್ರೌರ್ಯ.. ಗೀತೆಯ ಕೊನೆಯ ಸಾಲುಗಳಲ್ಲಿ ಅನಿಶ್ಚಿತ ಹೃದಯಸ್ಪರ್ಶಿ ಮೃದುತ್ವ ಗೋಚರಿಸುತ್ತದೆ.
ಪ್ರಸಕ್ತ ಕಾಲಘಟ್ಟದಲ್ಲಿನ ಜೀವನವೆಂಬ ದಿಬ್ಬಣದಲ್ಲಿ ಕ್ರೌರ್ಯವೇ ತುಂಬಿದೆ. ಪ್ರತಿಯೊಬ್ಬರಲ್ಲೂ ಸ್ವಾರ್ಥ. ಮಗುವಾಗಿದ್ದಾಗ ಮುಗ್ಧ ಕನಸುಗಳೊಂದಿಗೆ ಆಟವಾಡುತ್ತಾ ಅವನಷ್ಟಕ್ಕೇ ಬೆಳೆಯುತ್ತಿದ್ದವನು ಯುವಕನಾಗುತ್ತಲೇ ಮೆರೆಯುತ್ತ ತನಗಿಷ್ಟ ಬಂದಂತೆ ವರ್ತಿಸಿ ಮತ್ತೆ ವಯಸ್ಸಾಗುತ್ತಾ ವೃದ್ಧಾಪ್ಯ ಆವರಿಸಿದಂತೆ ತಾನು ಮಾಡಿದ ಹಳೇ ಪಾಪ ಕರ್ಮಗಳನ್ನು ನೆನೆಯುತ್ತಾ ಕೊರಗಿ ಕೊನೆಗಾಲದಲ್ಲಿ ಜ್ಞಾನೋದಯವಾಗಿ ಮನಸ್ಸು ಮೆತ್ತಗಾಗುವ ಪ್ರಕ್ರಿಯೆ ಇದರಲ್ಲಿ ಗೋಚರವಾಗುತ್ತಿದೆ.
ನಿಮಗೆ ಬೇರೆಯದೇ ರೀತಿಯಲ್ಲಿ ಇದು ಕಾಣಿಸಿರಬಹುದು ಹಾಗಾದಲ್ಲಿ ಪ್ರತಿಕ್ರಿಯೆಯಲ್ಲಿ ಅದನ್ನೆಲ್ಲಾ ಬರೆಯಿರಿ...
0 ಪ್ರತಿಕ್ರಿಯೆ:
Post a Comment